ಮಕ್ಕಳ ಮತ್ತು ದೊಡ್ಡವರ ಆರೋಗ್ಯ ಮತ್ತು ಬೆಳೆವಣಿಗೆಗೆ ಪ್ರೋಟೀನ್ ಅಥವಾ ಸಸಾರಜನಕ ಪದಾರ್ಥಗಳು ಅತ್ಯಾವಶ್ಯಕವೆಂಬುದು ಎಲ್ಲರಿಗೂ ತಿಳಿದ ವಿಷಯ. ನಮ್ಮ ಜನಸಾಮಾನ್ಯರ ಆಹಾರದಲ್ಲಿ ಇವು ಸಾಕಷ್ಟು ಇರುವುದಿಲ್ಲ. ಈ ಸ್ಥಿತಿಯನ್ನು ಉತ್ತಮಪಡಿಸುವ ದಿಶೆಯಲ್ಲಿ ಸಂಶೋಧನೆಗಳು ನಡೆದಿವೆ. ಭಾರತದಲ್ಲಿ ಪ್ರಾಣಿಮೂಲ ಆಹಾರಗಳು-ಹಾಲು, ಮಾಂಸ, ಮೀನು, ಮೊಟ್ಟೆ ಮುಂತಾದುವು ಹೆಚ್ಚಾಗಿಲ್ಲ. ಇದ್ದರೂ ದುಬಾರಿ ಬೆಲೆಯವು. ಆದ್ದರಿಂದ ಎಲ್ಲರಿಗೂ ಎಟಕುವ ಸಸ್ಯಮೂಲ ಆಹಾರಗಳಿಂದ ಇಡೀ ಪ್ರಯೋಜನವನ್ನು ಪಡೆಯಬೇಕು. ಇದಕ್ಕಾಗಿ ಕಡಲೆಕಾಯಿ, ಎಳ್ಳು, ಹತ್ತಿಕಾಳು ಮುಂತಾದ ಎಣ್ಣೆ ಬೀಜಗಳಿಂದ ಉತ್ತಮ ರೀತಿಯಲ್ಲಿ ತಯಾರಿಸಿದ ಹಿಂಡಿಗಳನ್ನು ಉಪಯೋಗಿಸಬಹುದು. ಇವನ್ನು ಸೂಕ್ತರೀತಿಯಲ್ಲಿ ಸಂಸ್ಕರಿಸಿ ಶುದ್ಧ ಪ್ರೋಟೀನ್ ಪದಾರ್ಥ ಪಡೆಯಬಹುದೆಂದು ಸಂಶೋಧನೆಗಳಿಂದ ತೋರಿಸಿಕೊಡಲಾಯಿತು. ಕಡಲೇಕಾಯಿ ಹಿಂಡಿಯಿಂದ ಪ್ರೋಟೀನ್ ಪದಾರ್ಥವನ್ನು ಮುಂಬಯಿಯ ಕಾರ್ಖಾನೆಯೊಂದು ಈಗ ಅಧಿಕ ಪ್ರಮಾಣದಲ್ಲಿ ತಯಾರಿಸುತ್ತಿದೆ. ಇದಕ್ಕೆ ಬೇಕಾದ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಆಹಾರ ಸಂಶೋಧನಾಲಯವೇ ಒದಗಿಸಿತು. ಈ ಪ್ರೋಟೀನನ್ನು ಹಾಲು, ರೊಟ್ಟಿ, ಬಿಸ್ಕತ್ತು, ಚಾಕೊಲೇಟ್ ಮುಂತಾದುವುಗಳ ತಯಾರಿಕೆಯಲ್ಲಿ ಈಗ ಅನೇಕರು ಉಪಯೋಗಿಸುತ್ತಿದ್ದಾರೆ. ಪ್ರೋಟೀನ್ ಹೆಚ್ಚಾಗಿರುವ ಕೆಲವು ಕಾಳು ಬೇಳೆಗಳಲ್ಲಿ ಅವನ್ನು ಅರಗಿಸಿಕೊಳ್ಳಲು ಅಡಚಣೆ ತರುವ ಕೆಲವು ಪದಾರ್ಥಗಳು (ಇನ್ಹಿಬಿಟರ್ಸ್) ಇರುತ್ತವೆ. ಇವನ್ನು ಹೇಗೆ ಸಂಸ್ಕರಿಸಿದರೆ ಈ ತೊಂದರೆಯನ್ನು ನೀಗಿಸಬಹುದೆಂಬುದನ್ನು ಕಂಡುಕೊಳ್ಳಲಾಗಿದೆ. ಕೆಲವು ಗಿಡಗಳ ಎಲೆಗಳಿಂದಲೂ ಪ್ರೋಟೀನ್ ಪದಾರ್ಥ ಪಡೆಯಬಹುದು. ಈ ದಿಶೆಯಲ್ಲೂ ಅನೇಕ ಪ್ರಯೋಗಗಳು ನಡೆಯುತ್ತಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ